ಅಮ್ಮಂದಿರ ದಿನದ ವಿಶೇಷ

ಲೇಖನ

ಅಮ್ಮಂದಿರ ದಿನ

ಹೆಚ್‌.ಮಂಜುಳಾ.

ಅಮ್ಮಂದಿರ ದಿನಕ್ಕೆ ಅಂತ ಬರೆಯುವುದಕ್ಕಿಂತ ಪ್ರತಿ ದಿನ ಅವಳಿಗಾಗಿ ಬರೆದರೂ ಮುಗಿಯದು ನನ್ನವ್ವನ ಋಣ! ಅವಳು ಅವಿದ್ಯಾವಂತೆ ಆದರೆ ಛಲಗಾತಿ,ಬದುಕಲ್ಲಿ ಹೋರಾಡಿ ಗೆದ್ದವಳು ಸಮಾಜದ ರೀತಿ ರಿವಾಜುಗಳನ್ನು ಅರಿತು ಬದುಕಿದವಳು. ನಮ್ಮದು ಮಧ್ಯಮ ವರ್ಗಕ್ಕಿಂತಲೂ ಕೆಳಗೆ ಅಂತಲ್ಲದಿದ್ದರೂ ಆ ಮಟ್ಟಕ್ಕೆ ಕರೆದುಕೊಳ್ಳಲೂ ಆಗದ ಸ್ಥಿತಿ. ನನ್ನ ತಂದೆಗೆ ಬರುವ ಕೇವಲ ನಲವತ್ತು ರೂಪಾಯಿಗಳ ತಿಂಗಳ ಸಂಬಳದಲ್ಲಿ ಮಕ್ಕಳಿಗೆ ಹೇಗೋ ಒಂದೊತ್ತಿನ ಊಟ ಕೊಡಬಹುದು ಬಿಟ್ಟರೆ ಇನ್ಯಾವ ಅಗತ್ಯಗಳನ್ನು ಒದಗಿಸಲಾಗದ ಪರಿಸ್ಥಿತಿ. ಹೊಟ್ಟೆ ಹಸಿವಿನಿಂದ ಮಕ್ಕಳು ಅತ್ತಾಗ ಗಂಗೆಯೇ ನಮ್ಮ ಹಸಿವು ಧಗೆಗಳನ್ನು ನೀಗಿಸುತ್ತಿದ್ದಳು! ಈಗಿನಂತೆ ಬದುಕಿಗೆ ನೂರಾರು ದಾರಿಗಳನ್ನು ಕಂಡುಕಳ್ಳಬಹುದಾದ ದಿನಗಳೂ ಅಲ್ಲ ಅವು. ನನ್ನವ್ವ ಎದೆಗುಂದಲಿಲ್ಲ. ಜಾವ ಕಳೆಯುವ ಹೊತ್ತಿಗೇ ಮನೆ ಕಲಸಗಳನ್ನು ಮುಗಿಸಿ, ಇದ್ದುದ್ದರಲ್ಲೇ ಮಕ್ಕಳ ಹಸಿವಿನ ಆಸರೆಗಾಗಿ ಏನೋ ಒಂದು ಮಾಡಿ ತಾನು ಮಾತ್ರ ನೀರಿನಿಂದ ಹೊಟ್ಟೆ ತುಂಬಿಸಿಕೊಂಡು ತಲೆ ಮೇಲೆ ಬುಟ್ಟಿ ಇಟ್ಟು ಮನೆ ಹೊರಗೆ ಕಾಲಿಡುವ ಹೊತ್ತಿಗೆ ಕೋಳಿಗಳು ಕೂಗಿ ಅವಳನ್ನು ಬೀಳ್ಕೊಡುತ್ತಿದ್ದವು.ಮಾರುಕಟ್ಟೆಯಲ್ಲಿ ಬಂದ ತರಕಾರಿಗಳನ್ನು ಖರೀದಿಸಿ ಭಾರವನ್ನು ತಲೆಯ ಮೇಲೆ ಹೊತ್ತು ಕೂಗುತ್ತಾ ಮನೆ ಮನೆಗೂ ಬುಟ್ಟಿಯನ್ನು ಇಳಿಸಿ ಮತ್ತೆ ಹೊರಿಸಿಕೊಂಡು ಊರನ್ನೆಲ್ಲಾ ಸುತ್ತಿ ಬುಟ್ಟಿ ಖಾಲಿಯಾಗುವ ಹೊತ್ತಿಗೆ ಹೈರಾಣಾದರೂ ತನ್ನ ಕರುಳಕುಡಿಗಳಿಗೆ ಮತ್ತೊಂದು ಹೊತ್ತು ಹೊಟ್ಟೆ ತುಂಬಿಸುವಂತಾಯಿತಲ್ಲ ಅನ್ನೋ ಖುಷಿಯಲ್ಲಿ ತನ್ನ ಚುರ್ ಗುಡುವ ಕರುಳಿನ ಕಡೆಗೆ ಅವಳ ಗಮನವೇ ಹರಿಯದು!
ಅಪ್ಪನ ಪೀಸ್ ವರ್ಕ್ ಅದು ಇದೂ ಅಂತ ಚೂರು ಪಾರು ಕಾಸು ಸಿಕ್ಕರೆ ಮಕ್ಕಳ ಮೈಗೊಂದು ಅಂಗಿಯ ಬರ ನೀಗುತ್ತಿತ್ತು!

   ಸಂಸಾರ ದೊಡ್ಡದಾದಂತೆ ಅಮ್ಮನ ಹೊರೆಯೂ ಹೆಚ್ಚಿತು. ತನ್ನಂತೆ ಮಕ್ಕಳು ಅವಿದ್ಯಾವಂತರಾಗಬಾರದು ಅವರೂ ನಾಲ್ಕು ಮಂದಿಯ ಸಮಕ್ಕೆ ಬೆಳೆಯಬೇಕೆಂಬ ಅದಮ್ಯ ಆಸೆ ಅವಳಿಗೆ ಆನೆಯ ಬಲ ತಂದಿತ್ತು! ತನ್ನ ತರಕಾರಿ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಅವಳು ಬೇರೆ ಬೇರೆ ಹಳ್ಳಿಗಳಿಗೆ ದೊಡ್ಡ ದೊಡ್ಡ ನಾಲ್ಕೈದು ಬುಟ್ಟಿಗಳಲ್ಲಿ ತರಕಾರಿ ತುಂಬಿಸಿಕೊಂಡು ಅದರ ಸುತ್ತಲೂ ಹೊದೆಯಲು ಉಪಯೋಗಿಸುತ್ತಿದ್ದ ಹಳೆಯ ದುಪ್ಪಡಿಗಳನ್ನು ಹರಡಿ ಗಂಟು ಕಟ್ಟಿ ಬಸ್ಸುಗಳ ಟಾಪಿನ ಮೇಲೆ ಹಾಕುವಾಗ ಹಮಾಲಿಯಿಂದ ಹಿಡಿದು ಡ್ರೈವರ್ ಕಂಡಕ್ಟರ್ ವರೆಗೆ ಎಲ್ಲರಿಗೂ ಅಣ್ಣ ಅಪ್ಪ ಎಂದು ಕೈ ಕಾಲು ಹಿಡಿದು ಬೇಡಿಕೊಳ್ಳುತ್ತಿದ್ದ ಅವಳ ಕಣ್ಣಲ್ಲಿ ಮಕ್ಕಳ ಏಳ್ಗೆಯ ಭೂತ ಕುಣಿಯುತ್ತಿತ್ತು.ಬೆಳಗಿನ ನಾಲ್ಕು ಗಂಟೆಗೆ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿಸಿ ಮನೆಗೆ ಬಂದು ಮಕ್ಕಳಿಗೆ ಅಡಿಗೆ ಮಾಡಿಟ್ಟು ಆರು ಗಂಟೆಯ ಹೊತ್ತಿಗೆ ಮನೆಯಿಂದ ಹೊರಡುವ ನನ್ನವ್ವನನ್ನು ನೋಡಿದರೆ ದೇವಸ್ಥಾನಕ್ಕೆ ಹೊರಟಂತೆ ಭಾಸವಾಗುತ್ತಿತ್ತು.ಸ್ನಾನಾದಿಗಳು ಮುಗಿದು ಹಳೆಯದಾದರೂ ಶುಭ್ರವಾದ ಸೀರೆ ಧರಿಸಿ ಹಣೆಗೆ ವಿಭೂತಿ ಕುಂಕುಮ ಇಟ್ಟರೆ ಅವಳನ್ನು ನೋಡುವುದೇ ಚೆಂದ.  ತಾನು ಹೋದ ಹಳ್ಳಿಯಲ್ಲಿ ಗುಡಿಯೋ ಅಥವಾ ಇನ್ಯಾವುದೋ ಒಂದು ಕಡೆ ಬುಟ್ಟಿಗಳನ್ನಿಳಿಸಿಕೊಂಡು ಆ ಎಲ್ಲದರ ತರಕಾರಿ ಹಣ್ಣುಗಳನ್ನು ಸ್ವಲ್ಪ ಸ್ವಲ್ಪವಾಗಿ ಇನ್ನೊಂದು ಬಟ್ಟಿಗೆ ತುಂಬಿಕೊಂಡು ಹಳ್ಳಿ ಸುತ್ತಲು ಹೊರಡುವ ಮುನ್ನ ಅಲ್ಲಿಯೇ ಇದ್ದ ಕೆಲ ಗಂಡುಮಕ್ಕಳಿಗೋ ಅಥವಾ ಆಟವಾಡುತ್ತಿದ್ದ ಸಣ್ಣ ಮಕ್ಕಳಿಗೋ ಆ ಬುಟ್ಟಿಗಳನ್ನು ನೋಡಿಕೊಳ್ಳಲು ಬೇಡಿಕೊಂಡು ಅವರಿಗೆ ತಿನ್ನಲು ಪೇರಲೆ ಮುಂತಾದ ಹಣ್ಣುಗಳನ್ನು ಕೊಟ್ಟು ಹೋಗುತ್ತಿದ್ದಳು. ಬಂದ ನಂತರ ಅವರ ಮನೆಗಳಿಗೆ ಆಗುವಷ್ಟು ತರಕಾರಿಗಳನ್ನು ಕೊಡುತ್ತಿದ್ದರಿಂದ ಅವರೂ ಸಹಕಾರ ನೀಡುತ್ತಿದ್ದರು. 

 ಅವ್ವನ ಪರಿಶ್ರಮಕ್ಕೆ ಕೈ ಜೋಡಿಸುತ್ತಲೇ ಮಕ್ಕಳು ಅವಳ ಕನಸನ್ನು ಈಡೇರಿಸುತ್ತಾ ಬೆಳೆಯುತ್ತಿದ್ದೆವು. ಒಮ್ಮೆ ಅವ್ವ ಎಂದಿನಂತೆ ತರಕಾರಿ ಮಾರಿ ಹಿಂದಿರುಗಿದಾಗ ಎರಡು ಬುಟ್ಟಿಗಳು ನಾಪತ್ತೆಯಾಗಿ ಅವಳು ದುಃಖಿಸುತ್ತಾ ಕುಳಿತಾಗ, ವಿಷಯ ತಿಳಿದ ಗೌಡತಿ ಅವ್ವನನ್ನು ಕರೆದು ವಿಚಾರಿಸಿ, ನಿನ್ನನ್ನು ನೋಡಿದರೆ ನಿನ್ನ ಮಾತುಗಳನ್ನು ಕೇಳಿದರೆ ಸಂತೋಷವಾಗುತ್ತದೆ. ನಿನ್ನ ಬುಟ್ಟಿಗಳನ್ನು ಕದ್ದವನ ಸುಮ್ಮನೆ ಬಿಡಲ್ಲ,  ಇನ್ನು ಮುಂದೆ ನಮ್ಮನೆ ಕಾಂಪೌಂಡ್ ಒಳಗಡೆ ತರಕಾರಿ ಬುಟ್ಟಿಗಳನ್ನಿಟ್ಟುಕೋ ಎಂದು ಹೇಳಿದರಂತೆ. 

ನನ್ನವ್ವ ಸ್ವಲ್ಪ ಕಪ್ಪಾದರೂ ತುಂಬಾ ಲಕ್ಷಣವಂತೆ ನಶ್ಯ ಬಣ್ಣದ ದುಂಡು ಕುಂಕುಮ ಅವಳ ಲಕ್ಷಣವನ್ನು ಇಮ್ಮಡಿಗೊಳಿ‌ಸಿತ್ತು.ಅವಳ ನಡೆ ನುಡಿ ಮಾತು ಎಲ್ಲರಿಗೂ ಇಷ್ಟವಾಗಿತ್ತು. ಗೌಡರ ಮನೆಯವರಷ್ಟೇ ಅಲ್ಲದೇ ಇಡೀ ಹಳ್ಳಿಯ ಜನ ಅವಳನ್ನು ತನ್ನ ಮನೆಯ ಸದಸ್ಯರಂತೆ ಕಾಣುವಂತಾಗಿತ್ತು. ಅವಳ ಆಸೆಯ ಬಳ್ಳಿ ಹೆಮ್ಮರವಾಗಿ ಬೆಳೆಯಿತು ಮಕ್ಕಳು ಬೆಳೆದು ಒಳ್ಳೆಯ ವಿದ್ಯಾವಂತರಾದರು.ಅವ್ವ ತನ್ನ ವ್ಯಾಪಾರ ನಿಲ್ಲಿಸಿದರೂ ಹಳ್ಳಿಗಳ ಜನರ ಒಡನಾಟ ಅನೇಕ ವರ್ಷಗಳ ವರೆಗೆ ಮುಂದುವರೆದಿತ್ತು. ಈಗ ನನ್ನವ್ವ ತನ್ನ ಮೊಮ್ಮಕ್ಕಳ ಬೆಳವಣಿಗೆ, ಮರಿಮಗುವಿನ ಆಟಪಾಠಗಳನ್ನು ನೋಡಿ ಆನಂದಿಸುತ್ತಿದ್ದಾಳೆ.

ನನ್ನವ್ವನ ಬಗ್ಗೆ ಬರೆಯಲು ಬೇಕಾದಷ್ಟಿದ್ದರೂ ಚಿಕ್ಕದಾಗಿರಲೆಂದು ಇಷ್ಷಕ್ಕೇ ನಿಲ್ಲಿಸುತ್ತಿದ್ದೇನೆ.ಅಂಥ ಅವ್ವನಿಗೆ ಮಕ್ಕಳಾಗಿ ಹುಟ್ಟಿದ ನಾವೆಲ್ಲ ಅದೃಷ್ಟವಂತರೇ ಸರಿ…!

ಎಲ್ಲಾ ಅಮ್ಮಂದಿರಿಗೂ ಹೃದಯ ಪೂರ್ವಕ ನಮಸ್ಕಾರಗಳು..!!


Leave a Reply

Back To Top